ಅನುಕರಣೆ 1

ಇನ್ನೊಬ್ಬರು ಮಾಡಿದಂತೆ ಮಾಡುವುದು, ಆಡಿದಂತೆ ಆಡುವುದು, ಕೃತಿಯೊಂದನ್ನು ನೋಡಿ ಅದೇ ತೆರನಾದ ಇನ್ನೊಂದನ್ನು ಸೃಷ್ಟಿಸುವುದು- ಇವೇ ಮೊದಲಾದ ಕಾರ್ಯಚಟುವಟಿಕೆಗಳಿಗೆ ಈ ಹೆಸರಿದೆ (ಇಮಿಟೇಷನ್). ಕೋತಿಯೊಂದು ತನ್ನ ಯಜಮಾನ ಕ್ಷೌರ ಮಾಡಿಕೊಳ್ಳುವುದನ್ನು ನೋಡಿ ತಾನು ಹಾಗೆಯೇ ಮಾಡುವುದು. ಮಗು ತಂದೆಯಂತೆ ಬೀಡಿ ಸೇದಲೆಳಸುವುದು ಅನುಕರಣೆಗೆ ಉದಾಹರಣೆಗಳು. ಒಬ್ಬ ವ್ಯಕ್ತಿ ತನ್ನನ್ನು ತಾನೇ ಅನುಕರಣ ಮಾಡುವುದೂ ಸಾಧ್ಯ. ಮನಶ್ಯಾಸ್ತ್ರಜ್ಞರು ಅನುಕರಣೆ ಸ್ಥೂಲವಾಗಿ ಎರಡು ಬಗೆಯದೆಂದು ವಿಂಗಡಿಸುತ್ತಾರೆ; ಉದ್ದೇಶಪೂರ್ವಕವಾಗಿ ಅನುಕರಣೆ ಮಾಡುವುದು ಒಂದು ರೀತಿ, ಇಚ್ಛಾಪೂರ್ವಕವಾಗಿಯಲ್ಲದೆ ಕೇವಲ ಯಾಂತ್ರಿಕವಾಗಿ ಅನುಕರಣೆ ಮಾಡುವುದು ಇನ್ನೊಂದು ರೀತಿ. ಕೆಲವು ವೇಳೆ ಮೊದಲು ಅನಿಚ್ಛಾಪೂರ್ವಕವೆಂದು ಕಂಡು ಬರುವ ಅನುಕರಣೆ ಯೋಚನೆ ಮಾಡಿದರೆ ಇಚ್ಛಾಪೂರ್ವಕವೂ ಆಗಿ ಪರಿಣಮಿಸಬಹುದು.
ಅನುಕರಣೆ ಮಾನವರ ಮತ್ತು ಪ್ರಾಣಿಗಳ ಜೀವನದಲ್ಲಿ ಪ್ರಮುಖ ಪಾತ್ರವಹಿಸಿರುತ್ತದೆ. ಮಕ್ಕಳ ಬೆಳೆವಣಿಗೆ ಬಹುಮಟ್ಟಿಗೆ ಅನುಕರಣೆಯನ್ನು ಅವಲಂಬಿಸಿದೆ. ಮಗುವಿನ ಮೂರನೆಯ ವರ್ಷದಲ್ಲೇ ಈ ಅನುಕರಣೆಯ ಅಭ್ಯಾಸ ಆರಂಭವಾಗುತ್ತದೆ ಎಂದು ಕೆಲವು ತಜ್ಞರ ಅಭಿಪ್ರಾಯ. ಅದು ನಾಲ್ಕನೆಯ ತಿಂಗಳಿಂದಲೇ ಮೊದಲಾಗುವುದೆಂದು ಡಾರ್ವಿನ್ನನ ಮತ. ದೊಡ್ಡವರೂ-ಅವರ ವಯಸ್ಸು ಎಷ್ಟೇ ಇರಲಿ-ಅನುಕರಣ ಪ್ರವೃತ್ತಿಯಿಂದ, ಚಾಪಲ್ಯದಿಂದ ವಿಮುಕ್ತರಲ್ಲ. ಏನೇ ಆಗಲಿ, ಗತಕಾಲದ ಅನೇಕಾನೇಕ ವಿಷಯಗಳು ಪರಂಪರಾಗತವಾಗಿ ಉಳಿದುಬಂದಿರುವುದು ಮಾನವಸಹಜವಾದ ಅನುಕರಣಪ್ರವೃತ್ತಿಯ ಪ್ರಭಾವದಿಂದಲೇ.
ಮನುಷ್ಯರಾಗಲಿ ಪ್ರಾಣಿಗಳಾಗಲಿ ಕಂಡುದನ್ನೆಲ್ಲ ಅನುಕರಣೆ ಮಾಡುತ್ತಾರೆ ಎಂದು ಭಾವಿಸಬಾರದು. ಅನುಕರಣೆಗೂ ಆಯಾ ಪ್ರಾಣಿವರ್ಗದ ಮೂಲಪ್ರವೃತ್ತಿಗೂ ಸಂಬಂಧವಿದೆ. ಬೇರೆ ಬೇರೆ ಜಾತಿಯ ಪ್ರಾಣಿಗಳನೇಕವು ಒಟ್ಟಿಗೆ ಒಂದೇ ಕಡೆ ಇದ್ದರೆ ಒಂದು ಜಾತಿಯ ಪ್ರಾಣಿ ತನ್ನ ಜಾತಿಯ ಪ್ರಾಣಿಗಳನ್ನು ಮಾತ್ರ ಅನುಕರಣೆ ಮಾಡುತ್ತದೆಯೇ ಹೊರತು ಸುತ್ತಮುತ್ತ ಇರುವ ಎಲ್ಲ ಪ್ರಾಣಿಗಳನ್ನೂ ಅಲ್ಲ. ಮನುಷ್ಯರು ಮನುಷ್ಯರನ್ನು ಅನುಕರಣೆ ಮಾಡುತ್ತಾರೆ, ಪ್ರಾಣಿಗಳನ್ನಲ್ಲ. ಕಲೆಗಾಗಿ ಅಲ್ಲದೆ ನಿಜಜೀವನದಲ್ಲಿ ಪ್ರಾಣಿಗಳನ್ನು ಅನುಕರಣೆಗೈಯುವ ಮನುಷ್ಯ ಪಶುಸಮಾನನಾಗುತ್ತಾನೆ.

ಮಾನವ ಸಮಾಜದ ಕಾರ್ಯಕ್ಷೇತ್ರದಲ್ಲಿ ಅನುಕರಣೆ ಹಿರಿಯಪಾತ್ರ ವಹಿಸುತ್ತದೆ. ಅನುಕರಣೆಯ ಸಹಾಯದಿಂದ ತಮ್ಮ ಇಷ್ಟಾರ್ಥಗಳನ್ನು ನೆರವೇರಿಸಿಕೊಳ್ಳಬಹುದೆಂದು ಅನೇಕರು ಭಾವಿಸಿರುತ್ತಾರೆ. ಶತ್ರುಗಳ ಪ್ರತಿಮೆಗಳನ್ನು ತಯಾರಿಸಿ ಅವನ್ನು ಚಿತ್ರಹಿಂಸೆಗೆ ಗುರಿಪಡಿಸುವುದರಿಂದ ಆ ಶತ್ರುಗಳಿಗೆ ಹಾನಿಯುಂಟುಮಾಡಲೆಳಸುವುದು ಅವರ ಪದ್ಧತಿಗಳಲ್ಲೊಂದು. ಕೆಲವು ಕಡೆ ಮಳೆಬರಿಸುವ ಸಲುವಾಗಿ ರೈತರು ನೀರನ್ನು ನೆಲಕ್ಕೆ ಸುರಿಯುತ್ತಾರಂತೆ. ಹೀಗೆಯೇ ಸಮುದ್ರದ ಮೇಲೆ ಗಾಳಿಯನ್ನು ಎಬ್ಬಿಸಲು ನಾವಿಕರು ಸಿಳ್ಳುಹಾಕುತ್ತಾರಂತೆ. ಪ್ರಾಣಿಗಳ ಮತ್ತು ಮಾನವನ ಎಲ್ಲ ಮುಖಗಳ ವಿಕಸನಕ್ಕೂ ಅನುಕರಣೆಯೇ ಮೂಲವೆಂದು ಹೇಳುವ ವಿದ್ವಾಂಸರೂ ಕೆಲವರಿದ್ದಾರೆ. ಹೊಸ ವಸ್ತುಗಳನ್ನು ಕಂಡುಹಿಡಿಯುವುದೂ ಅನುಕರಣೆಯ ಫಲವಾಗಿಯೇ ಎನ್ನಬಹುದು. ಇತರರು ಮಾಡುವುದನ್ನು ವಿರೋಧಿಸಿ ಅದಕ್ಕೆ ವ್ಯತಿರಿಕ್ತವಾಗಿ ಕೆಲಸಮಾಡುವುದೂ ಒಂದು ಬಗೆಯ ಅನುಕರಣೆಯೇ ಎಂಬ ಅಭಿಪ್ರಾಯವೂ ಇದೆ.

ಅನುಕರಣೆಯೆಂಬ ಮಾತನ್ನು ವಿಶೇಷ ಸಂದರ್ಭಗಳಲ್ಲಿ ತಾಂತ್ರಿಕಪದವಾಗಿ ಬಳಸುವುದೂ ವಾಡಿಕೆ. ಸೌಂದರ್ಯಶಾಸ್ತ್ರದಲ್ಲಿ ಅದಕ್ಕೆ ಪ್ರಾಶಸ್ತ್ಯ ಬಂದಿರುವುದು ಗ್ರೀಕ್ ತತ್ತ್ವಜ್ಞಾನಿಗಳಾದ ಪ್ಲೇಟೊ ಮತ್ತು ಅರಿಸ್ಟಾಟಲ್ ಅದನ್ನು ಬಳಸಿರುವುದರಿಂದ. ಸ್ಥೂಲ ಪ್ರಪಂಚದ ಪದಾರ್ಥಗಳೆಲ್ಲ ಆದರ್ಶಲೋಕದ ಅನ್ಯೂನವಸ್ತುಗತ ಮತ್ತು ಕಲ್ಪನೆಗಳ ಅಪೂರ್ಣಾನುಕರಣೆಯ ಫಲಗಳೆಂದು ಪ್ಲೇಟೊ ವಾದಿಸಿದ. ಅವನ ಶಿಷ್ಯ ಅರಿಸ್ಟಾಟಲ್ ಕಾವ್ಯಶಾಸ್ತ್ರವನ್ನು ಕುರಿತು ತಾನು ಬರೆದಿರುವ ಗ್ರಂಥದಲ್ಲಿ ಕಲೆಯ ಕೆಲಸ ಅನುಕರಣೆ ಎಂದಿದ್ದಾನೆ. ಪ್ರಕೃತಿಯಲ್ಲಿ ಅಥವಾ ಸೃಷ್ಟಿಯಲ್ಲಿ ಕಂಡುಬರುವ ವಸ್ತುಗಳ ಅನುಕರಣೆಗೈದು ಅದೇ ತೆರನಾದ ಪ್ರತಿಕೃತಿಗಳನ್ನು ನಿರ್ಮಿಸುವುದೇ ಕಲೆಯ ಉದ್ದೇಶವೆಂದು ಅವನ ಮತ. ಈ ಸಿದ್ಧಾಂತವನ್ನು ಎಲ್ಲರೂ ಸಂಪೂರ್ಣವಾಗಿ ಒಪ್ಪಿಲ್ಲದಿದ್ದರೂ ಅದು ಸಾಹಿತ್ಯವಿಮರ್ಶೆಯ ಕ್ಷೇತ್ರದಲ್ಲಿ ಸುಪ್ರಸಿದ್ಧವಾಗಿದೆ. ಶುದ್ಧಾನುಕರಣೆಯಿಂದ ಜೀವನದ ಪ್ರತಿಕೃತಿಯನ್ನು ಸಿದ್ಧಮಾಡುವದೇ ಕಲೆಯ ಕೆಲಸವಲ್ಲ. ಜೀವನದರ್ಶನ, ಪರಿಶೀಲನೆಗಳೇ ಕಲೆಯ ವಸ್ತುವಾದರೂ ಅದರ ಆಯ್ಕೆ ರಚನೆ ಹಾಗೂ ಧ್ಯೇಯ ಧೋರಣೆಗಳಿಂದಾಗಿ ಅದು ಶುದ್ಧಾನುಕರಣೆಯಾಗದೆ, ಶುದ್ಧಪ್ರತಿಕೃತಿಯಾಗದೆ ಕಲಾವಿದನ ಸ್ವಂತ ಕೃತಿಯಾಗುತ್ತದೆ. ಆದರೆ ಸಾಮಾನ್ಯವಾಗಿ ಅನುಕರಣೆ ಕಲಾಸೃಷ್ಟಿಯ ಪ್ರಾರಂಭದ ಮೆಟ್ಟಿಲು. ಅದರಿಂದ ಕಲೆಗಾರನ ಅನುಭವ ಪಕ್ವವಾಗುತ್ತದೆ. ಅನಂತರ ಪ್ರತಿಭಾಶಕ್ತಿ ಕುದುರಿದಂತೆಲ್ಲ ಅವನ ಸ್ವಂತ ಸೃಷ್ಟಿ ಪ್ರಾರಂಭವಾಗುತ್ತದೆ. ವೈಜ್ಞಾನಿಕರೂ ಈ ಮಾತನ್ನು ತಮ್ಮವೇ ಆದ ಉದ್ದೇಶಗಳಿಗಾಗಿ ಬಳಸಿಕೊಂಡಿದ್ದಾರೆ. ಒಂದು ವಸ್ತುವಿನ ಬಾಹ್ಯ ಲಕ್ಷಣಗಳನ್ನು ಇನ್ನೊಂದು ವಸ್ತು ಹೀರಿ ತನ್ನದನ್ನಾಗಿ ಮಾಡಿಕೊಳ್ಳುವುದನ್ನು ಜೀವಶಾಸ್ತ್ರಜ್ಞರು ಅನುಕರಣೆ ಎಂದು ಕರೆವುದುಂಟು. ಸಂಗೀತದಲ್ಲಿ ಒಂದು ರಾಗದಲ್ಲಿ ಹಾಡಲೆಂದು ರಚಿತವಾಗಿರುವ ಹಾಡು ಅಥವಾ ಹಾಡಿನ ಭಾಗವನ್ನು ಇನ್ನೊಂದು ರಾಗಕ್ಕೆ ಅಳವಡಿಸಿಕೊಂಡು ಗಾನಗೈಯುವುದು ಅನುಕರಣೆ ಎನ್ನಿಸಿಕೊಳ್ಳುತ್ತದೆ.

ಅನುಕರಣೆ ಸಾಮಾಜಿಕ ಜೀವನದಲ್ಲಿ ಪ್ರಭಾವಕಾರಿಯಾಗಬಲ್ಲದು. ಅನುಕರಣೆಗೈಯುವವನು ತಾನು ಯಾರಂತೆ ನಡೆದುಕೊಳ್ಳುತ್ತಾನೋ ಅವರ ಗುಣದೋಷಗಳನ್ನೂ ಮನೋಭಾವಗಳನ್ನೂ ಊಹಿಸಿಕೊಳ್ಳಬೇಕು. ಇದರಿಂದ ಜನರಲ್ಲಿ ಪರಸ್ಪರ ಒಪ್ಪಿಗೆ ಅನುಕಂಪಗಳು ಮೂಡಲು-ಅವರ ಸಾಮಾಜಿಕ ಪ್ರಜ್ಞೆ ಬೆಳೆಯಲು-ಸಾಧ್ಯವಾಗುತ್ತದೆ. ಆದಕಾರಣ ಮಕ್ಕಳ ಅನುಕರಣಾಸಕ್ತಿಯನ್ನು ಸರಿಯಾಗಿ ಬಳಸಿಕೊಳ್ಳುವ ಅಗತ್ಯವನ್ನು ಶಿಕ್ಷಣಶಾಸ್ತ್ರಜ್ಞರೂ ಮನಶ್ಯಾಸ್ತ್ರಜ್ಞರೂ ಒತ್ತಿ ಹೇಳಿರುವರು. 			   
(ಎಂ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ